Wednesday, September 30, 2015

ಗಾಂಧಿ ಜಯಂತಿ

ಗಾಂಧಿ ಜಯಂತಿ - ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ.ಮಹಾತ್ಮ ಗಾಂಧೀಜಿ

ಗಾಂಧಿ ಜಯಂತಿಯ ಮಹತ್ವ

ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ.ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು.

ಗಾಂಧಿಯವರ ಜನನ, ಜೀವನ

ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ , ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ ,ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. 19 ನೆಯ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿಯನ್ನು ಮುಗಿಸಿ ಬಂದು. ಮುಂಬೈ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು.ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ಮೇಲೆ ತೆರಳಿದರು. ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದುಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರಹಾಕಿದಾಗ, ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು.

ಹೋರಾಟ, ಚಳುವಳಿ, ಸತ್ಯಾಗ್ರಹ, ಇತ್ಯಾದಿ

ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿಭಗವದ್ಗೀತೆ, ಮತ್ತು ರಷ್ಯದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರುಅಮೆರಿಕನ್ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು. ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು.ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು.ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು.

ತತ್ವ, ಸಿದ್ದಾಂತಗಳು

ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು.36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು.ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು.ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಬನ್ನಿ ಅವರ ಹಾದಿಯಲ್ಲಿ ನಾವೂ ಸಹ ಸಾಗಲು ಪ್ರಯತ್ನಿಸೋಣ.

Thursday, September 17, 2015

ಚಿಂತನೆ

ದಿನಕ್ಕೊಂದು ಮಾತು
ಆತ್ಮೀಯರೆ
ನಾವು ಯಾವುದೇ ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತಿರುವಾಗ ಆತ್ಮತೃಪ್ತಿ ಇರಬೇಕು ಅಂದಾಗ ಮನಸ್ಸಿಗೆ ನೆಮ್ಮದಿ ಅಲ್ವೇ? ಆದರೆ ನಾವು ಮಾಡುವ ಕೆಲಸವನ್ನು ಕೆಲವೊಮ್ಮೆ ಅನಿವಾರ್ಯ ಬಂದಾಗ ಸಮರ್ಥರಿಗೆ ಸಮರ್ಪಿಸಬೇಕೆ ವಿನಃ ಹೇಡಿಯಾದವನಿಗೆ ಒಪ್ಪಿಸಬಾರದು ಏಕೆಂದರೆ ಹಿಂಜರಿಕೆ,ಆಲಸ್ಯ,ತಾತ್ಸರ ಅವನ ಮನದ ಮನೆಯಲ್ಲಿ ಒಡೆಯರಾಗಿರುತ್ತಾರೆ,ಇದರಿಂದ ಒಪ್ಪಿಸಿದ ಕೆಲವನ್ನು ಕಲಾಸ್ ಮಾಡಿದರು ಮಾಡಬಹುದು.ಇದರಿಂದ ನಿಮ್ಮ ಸ್ಥಾನಮಾನವು ನಶಿಸಬಹುದು.
ಹೇಡಿಗೆ ಹಿರಿತನುವು|ಮೂಢಂಗೆ ಗುರುತನವು
ನಾಡ ನೀಚರಿಗೆ ದೊರೆತನವು|ದೊರೆತಿಹರೆ
ನಾಡೆಲ್ಲ ಕೆಡಗು ಸರ್ಜ್ಞನ|
ಸರ್ವಜ್ಞನ ಮಾತುಗಳನ್ನು ಅರಿತರೆ ಯಾರಿಗೆ,ಯಾವ ಜವಾಬ್ದಾರಿ ನೀಡಬಹುದು ಎನ್ನುವುದು ಮನದಟ್ಟಾಗುತ್ತದೆ. ಜೀವನದಲ್ಲಿ ಯಶಸ್ವಿಯಾಗಬೇಕಾದರೆ "ಗುರು-ಹಿರಿಯರ ಮಾರ್ಗದರ್ಶನ,ಆಶೀರ್ವಾದ ಅವಶ್ಯಬೇಕಾಗುತ್ತದೆ.
"ಹಸಿವಾದಡೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಹಳ್ಳಬಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಯಶಸ್ವಿ ಹಾದಿಗೆ ಗುರು-ಹಿರಿಯರ ಮಾರ್ಗಗಳುಂಟು." ಎನ್ನುವ ಅನುಭವಿ ಶರಣರ ನೀತಿಯನು ಪಾಲಿಸಿದಾಗ ಯಶ ಕಾಣಲು ಸಾಧ್ಯ. ಆದ್ದರಿಂದ ಯಾವುದೇ ಕೆಲಸ- ಕಾರ್ಯ ಮಾಡುವಾಗ ಯೋಚನೆ-ಯೋಜನೆ,ಇಟ್ಟುಕೊಂಡು ನಡೆದರೆ ಸಾಧನೆ ಮಾರ್ಗದಲ್ಲಿ ಜಯ,ಶ್ರೇಯಸ್ಸು ,ಯಶಸ್ಸು ನಮ್ಮದಾಗಲು ಸಾಧ್ಯ.ಗುರು-ಹಿರಿಯರ ಮಾರ್ಗಪಡೆದು,ಯಶಸ್ವಿ ಹಾದಿಯನ್ನು ತುಳಿಯೋಣ,ಜೀವನದಲ್ಲಿ ಜಯ ಕಾಣೋಣ.
✒ಬಲಭೀಮಸೇನಾಚಾರ್ ಸ.ಶಿ
ಸ.ಮಾ.ಹಿ.ಪ್ರಾ.ಬಾಲಕಿಯರ.ಗಂಗಾವತಿ.

Thought

ಶುಭಬೆಳಗು, ಗೆಳೆಯರೇ, ಹದ್ದು ಯಾರಿಗೆ ಗೊತ್ತಿಲ್ಲದ ಪಕ್ಷಿ? ಆದರೆ ಅದರ ಜೀವನ ಕ್ರಮವಿದೆಯಲ್ಲಾ ತುಂಬಾ ಕಠಿಣ. ಸುಮಾರು ೭೫ ವರ್ಷಗಳ ಕಾಲ ಬದುಕುವ ಹದ್ದು ಮಧ್ಯ ವಯಸ್ಸಿನ ನಂತರ ಭಾರವಾದ ರಕ್ಕೆಗಳಿಂದಾಗಿ ತೀಕ್ಷ್ಣವಾಗಿ ಹಾರಲಾರದು ಹಾಗೂ ಅದರ ಕೊಕ್ಕು ಮೊಂಡಾಗುವದರಿಂದ ಅದು ಬೇಟೆಯಾಡಲು ತೊಡಕಾಗುವುದು. ಆಗ ಅದಕ್ಕೆ ಉಳಿಯುವುದು ಎರಡೇ ದಾರಿ, ಒಂದು ಅದು ತನ್ನ ರೆಕ್ಕೆಪುಕ್ಕಗಳನ್ನು,  ಕೊಕ್ಕನ್ನು ಬಲಪಡಿಸಿಕೊಂಡು ಬದುಕಬೇಕು, ಎರಡು ಸಾಯಬೇಕು. ಹದ್ದು ಆ ಕ್ಷಣಕ್ಕೆ ಒಂದು ಎತ್ತರವಾದ ಬೆಟ್ಟದ ಮೇಲೆ ಹೋಗಿ ಅತಿ ಕಠಿಣವಾದ ರೀತಿಯಲ್ಲಿ ತನ್ನ ಭಾರವಾದ ರೆಕ್ಕೆಗಳನ್ನು ಕಿತ್ತಿಕೊಳ್ಳುತ್ತದೆ, ಮೊಂಡಾದ ಕೊಕ್ಕನ್ನು ಕಲ್ಲು ಬಂಡೆಗೆ ಉಜ್ಜಿ ಉಜ್ಜಿ ಚೂಪಾಗಿಸಿಕೊಳ್ಳುತ್ತದೆ. ಇದು ಕೇವಲ ಒಂದೇ ದಿನದಲ್ಲಾಗುವ ಕೆಲಸವಲ್ಲ. ಹಲವು ದಿನಗಳ ನಿರಂತರ ಕಠಿಣ ಶ್ರಮ ಹಾಗೂ ನೋವನ್ನು ಸಹಿಸಿ ಹದ್ದು ಮತ್ತೇ ಮೊದಲಿನಂತೆ ಬಲಿಷ್ಠಗೊಂಡು ಬೇಟೆಯಾಡಲು ಮತ್ತು ಹಾರಾಡಲು ಪ್ರಾರಂಭಿಸುತ್ತದೆ. ಗೆಳೆಯರೇ,  ಎಲ್ಲ ಜೀವಿಗಳ ಜೀವನ ಕ್ರಮದಿಂದ ನಾವು ಮಾನವರು ಕಲಿಯಬೇಕಾದದ್ದು ಬೇಕಾದಷ್ಟಿದೆ. ನಾವು ಜೀವನದಲ್ಲಿ ವಯಸ್ಸಾದಂತೆ,  ಕೆಲಸದಲ್ಲಿ ಅನುಭವ ಹೆಚ್ಚಾದಂತೆ ಅದನ್ನು ಒರೆಗೆ ಹಚ್ಚಿ ನಮ್ಮ ತೀಕ್ಷ್ಣತೆ ಕಡಿಮೆಯಾಗುತ್ತದೆ ಆಗ ನಮ್ಮ ಕೆಲಸ ಮಾಡುವ ವೇಗ ಕಡಿಮೆಯಾದರೆ ಅದನ್ನು ಖಂಡಿತಾ ನಾವು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸಲೇಬೇಕು, ಅಂದಾಗ ಮಾತ್ರ ನಮ್ಮ ಕೆಲಸ ಮೊದಲಿನಂತೆಯೇ ಚಾಣಾಕ್ಷತನದಿಂದ ಕೂಡಿರಲು ಸಾಧ್ಯ ಇಲ್ಲದಿದ್ದರೆ ನಾವು ಇದ್ದೂ ಇಲ್ಲದಂತಾಗಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ. ಶುಭೋದಯ.
BRJOSHI ASSISTANT TEACHER
GOV'T MAPS FOR GIRLS GANGAVATHI
.KOPPEL.

ಚಿಂತನೆ

ಮಲ್ಗೋಕ್ ಮುಂಚೆ, ಗೆಳೆಯರೆ, "ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಕಾರ್ಯವನ್ನು ಮಾಡುವ ಅಭ್ಯಾಸವಿದ್ದರೆ, ಈಗೇನು ಮಾಡಲಿ, ಇನ್ನೇನು ಮಾಡಲಿ ಎಂದು ತಲೆ ಕೆರೆದುಕೊಳ್ಳುವುದು ತಪ್ಪುತ್ತದೆ ಹಾಗೂ ಸಮಯ ಉಳಿಯುತ್ತದೆ." ನಿಜಾ ಅಲ್ವಾ? ನಮ್ಮ.ಯಾವುದೇ ಕೆಲಸವನ್ನು ಒಂದು ಯೋಜನೆ ಹಾಕಿಕೊಂಡು ಸಮಯಕ್ಕೆ ತಕ್ಕಂತೆ ಅವನ್ನು ಮುಗಿಸಿದರೆ ಬೇರೆ ಯಾರ ಮುಂದೆಯೂ ತಲೆ ಕೆರೆದುಕೊಳ್ಳುವ ಅವಶ್ಯಕತೆ ಇಲ್ಲಾ, ಅದಕ್ಕೆ ಡಾ//ಎಂ ವಿಶ್ವೇಶ್ವರಯ್ಯನವರು ಹೇಳುತ್ತಾರೆ,plan or perish. (ಯೋಜಿಸಿ ಇಲ್ಲವೇ ನಾಶವಾಗಿ )ಎಂದು. ಒಂದು ಕೆಲಸವನ್ನು ಒಪ್ಪಿಕೊಂಡಮೇಲೆ ಆ ಕೆಲಸವನ್ನು ನಿಷ್ಠೆಯಿಂದ ಮಾಡಿ ಮುಗಿಸಬೇಕಾದದ್ದು ನಮ್ಮ ಜವಾಬ್ದಾರಿ. ಅದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎಂದು ಮೊದಲೇ ಅನಿಸಿದರೆ ಆ ಕೆಲಸವನ್ನು ಒಪ್ಪಲೇ ಬಾರದು, ಅದಕ್ಕೆ ಯಾವುದೇ ಕೆಲಸ ಹಾಗೂ ಜವಾಬ್ದಾರಿಯಾಗಲಿ ಮೊದಲೆ ತಿಳಿದುಕೊಂಡು ಅದರ ಬಗೆಗಿನ ಪೂರ್ವಾಪರಗಳನ್ನು ಅರಿತು ಒಪ್ಪಿಕೊಳ್ಳಬೇಕು.ಅದು ಬಿಟ್ಟು ಒಪ್ಪಿಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸದಿದ್ದರೆ , ಸಿಕ್ಕವರ ಮುಂದೆಲ್ಲಾ ಅಸಹಾಯಕರಾಗಿ ತಲೆ ಕೆರೆದುಕೊಳ್ಳುತ್ತಾ ನಿಲ್ಲಬೇಕಾಗುತ್ತದೆ. ನಮ್ಮ ಕೆಲಸವನ್ನು ನಾವು ಅಸಡ್ಡೆಯಿಂದ ನೋಡಿದರೆ,ಜಗತ್ತು ನಮ್ಮನ್ನು ಅಸಡ್ಡೆಯಿಂದ ಅನಾದರದಿಂದ ನೋಡಿ ಗೇಲಿಮಾಡುತ್ತದೆ. ನಮ್ಮ ಕೆಲಸವನ್ನು ನಾವು ಗೌರವಿಸಿ, ಭಕ್ತಿಯಿಂದ, ಪ್ರೀತಿಯಿಂದ ಮಾಡಿದರೆ ಜನರು ನಮ್ಮನ್ನು ಮೆಚ್ಚದಿದ್ದರೂ ಬೇಕಾಗಿಲ್ಲ ಕೊನೆಪಕ್ಷ ನಮ್ಮ ಆತ್ಮಸಾಕ್ಷಿ ಮೆಚ್ಚಿ ಒಪ್ಪಿದರೆ ಸಾಕು, ನಾವು ಯಾರಿಗೆ ಬೇಕಾದರೂ ಮೋಸ ಮಾಡಬಹುದು ಆದರೆ ನಮ್ಮ ಮನಸಾಕ್ಷಿಗೆ? ನೋ ಚಾನ್ಸ್. ನಮ್ಮ ವೃತ್ತಿಯನ್ನು ಪ್ರೀತಿಸೋಣ, ಗೌರವಿಸೋಣ, ಅಂದುಕೊಂಡ ಕೆಲಸವನ್ನು ಅಂದೇ ಮಾಡಿ ಮುಗಿಸೋಣ, ಶುಭರಾತ್ರಿ.

ಚಿಂತನೆ

ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ:|
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ||

ಸ್ನೇಹಿತರೇ ಮಾತು ಮಾಣಿಕ್ಯ
ಮಾತಿನಿಂ ನಗೆ ಹನಿಯು,ಮಾತಿನಿಂದ ಹಗೆ ಹನಿಯು ಎನ್ನುವಂತೆ
ಪ್ರಿಯವಾದ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ. ಆದ್ದರಿಂದ ಸದಾ ಪ್ರಿಯವಾದ ಮಾತುಗಳನ್ನೇ ಆಡಬೇಕು. ಪ್ರಿಯವಾದ ಮಾತಿಗೆ ಬಡತನವುಂಟೆ?

ಭಗವಂತನು ಕರುಣಿಸಿರುವ ಅದ್ಭುತ ಸಂಪತ್ತೆಂದರೆ ಮಾತು. ಮನುಷ್ಯನನ್ನು ಸಂತೋಷಗೊಳಿಸಲು ಎಲ್ಲಕ್ಕಿಂತಲೂ ಉತ್ತಮಮಾರ್ಗವೆಂದರೆ ಮಾತು. ಯಾವುದರಿಂದಲೂ ಸಮಾಧಾನಪಡಿಸಲಾಗದ್ದು ಒಳ್ಳೆಯ ಮಾತಿನಿಂದ ಸಾಧ್ಯವಾಗುತ್ತದೆ. ಮಾತೇಮುತ್ತು. ಮಾತೇ ಮೃತ್ಯು. ಒಳ್ಳೆಯ ಮಾತನ್ನಾಡಿ ಸಮಾಜದಲ್ಲಿ ಒಳ್ಳೆಯವನೆನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮಾತಿನಿಂದಲೇಮತ್ತೊಬ್ಬರಿಗೆ ತಲೆನೋವು ತರುವ ಜನರೂ ಇದ್ದಾರೆ. ಕೆಲವರಿಗೆ ಮಾತು ಒಂದು ಚಟ.ಆದರೆ ನಿರ್ಮಲ ಹೃದಯದಿಂದಮತ್ತೊಬ್ಬರಿಗೆ ಕಿರಿಕಿರಿಯಾಗದಂತೆ ಮಾತನಾಡುವುದು ಒಂದು ಕಲೆಯೂ ಹೌದು, ಗುಣವೂ ಹೌದು. ಪ್ರಿಯವಾದ ಮಾತಿಗೆಬಡತನವಿಲ್ಲ. ಪ್ರಿಯವಾದ ಮಾತನ್ನೇ ಆಡೋಣ ಗೆಳೆಯರೇ
   ಶುಭೋದಯ.
ಬಿ.ಆರ್.ಜೋಷಿ.ಕಾರ್ಯಕಾರಿ ಸಮಿತಿ ಸದಸ್ಯರು
ಕ .ರಾ.ಸ.ನೌ.ಸಂ.ಜಿಲ್ಲಾ ಘಟಕ ಕೊಪ್ಪಳ.

ಚಿಂತನೆ

ಶುಭಬೆಳಗು, ಗೆಳೆಯರೇ, ಮನುಷ್ಯ ಬದುಕಬೇಕು, ಅದಕ್ಕಾಗಿ ಆಶೆಗಳು ಬೇಕು. ಆಶೆ ಎಂಬುದಿಲ್ಲದಿದ್ದರೆ ನಮ್ಮ ಎಲ್ಲ ಕೆಲಸಗಳೂ ಸ್ಥಗಿತವಾಗುತ್ತಿದ್ದವೇನೋ, ಯಾಕೆಂದರೆ ಏನು ಬೇಡ ಎಂಬ ಮನಸ್ಸು ಏನನ್ನೂ ಮಾಡದು. ಆದರೆ ಅತಿಯಾಶೆ ಒಳ್ಳೆಯದಲ್ಲ. ಅತಿಯಾಶೆಯಿಂದ ದುಖಃ ಸಹಜ. ಎಲ್ಲವೂ ಬೇಕೆಂಬ ಭಾವನೆ ಹೊಂದಿದಾಗ, ಅಥವಾ ನನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಬಯಸಿದಾಗ ಅದು ದೊರಯುವುದು ಕಷ್ಟ, ಆಗ ನಮ್ಮ ಮನಸ್ಸು ಅಶಾಂತವಾಗುತ್ತದೆ. ಅಶಾಂತವಾದ ಮನಸ್ಸು ಏನಾದರೂ ಮಡಲು ಸಿದ್ಧವಾಗುತ್ತದೆ. ಅಶಾಂತ ಮನಸ್ಸಿನಿಂದ ಅಪ್ರಯೋಜಕ, ಅನಾಹುತಕಾರಿ ಸಂಗತಿಗಳುಂಟಾಗುತ್ತವೆ. ಅವು ಬೇರೆಯವರಿಗೆ ತೊಂದರೆದಾಯಕವಾಗಬಹುದು ಕೆಲವೊಮ್ಮೆ ನಮಗೆ ತೊಂದರೆದಾಯಕವಾಗಬಹುದು. ಯಾರಿಗೆ ತೊಂದರೆಯಾದರೂ ಅದರಿಂದ ದುಖಃ ತಪ್ಪಿದ್ದಲ್ಲ. ಆಶೆಯ ದುಖಃಕ್ಕೆ ಕಾರಣ ಎಂದು ಬುದ್ಧ ಹೇಳಿದ್ದು. "ಎಲ್ಲ ಆಶೆಯ ಬಿಟ್ಟರಿಲ್ಲಿಯೇ ಕೈಲಾಸ, ಎಲ್ಲವನು ಬಯಸಿ ಭ್ರಮಿಸಲು ನರಕತಾನಿಲ್ಲಿಯೇ ನೋಡು ಸರ್ವಜ್ಞ"ಎಂಬ ಸರ್ವಜ್ಞರ ವಚನವಿದೆ. ಇದರರ್ಥ,  ಈ ಭೂಮಿಯ ಮೇಲೆ ಎಲ್ಲ ವಿಷಯಗಳ ಮೇಲಿನ ಆಶೆಯನ್ನು ಬಿಟ್ಟು ಬಿಟ್ಟರೆ ಇಲ್ಲಿಯೇ ಅಂದರೆ ನಾವಿರುವಲ್ಲಿಯೇ ಸ್ವರ್ಗವಿದೆ. ಆದರೆ ಸಕಲ ವಿಷಯಗಳನ್ನು ಅಪೇಕ್ಷಿಸುವ ಅವುಗಳ ಪ್ರಪ್ತಿಗಾಗಿ ದೇಶವನ್ನೆಲ್ಲ ತಿರುಗಹತ್ತಿದರೆ ಆಗ ನರಕವೂ ಇಲ್ಲಿಯೇ ಇರುವುದೆಂದು ತಿಳಿಯಬೇಕು. ಹೌದಲ್ಲವೇ? ಯಾವಾಗ ನಮ್ಮ ಆಶೆ ಈಡೆರುವುದಿಲ್ಲವೋ ಆಗ ಮನಸ್ಸು ದುರ್ಬಲವಾಗಿ,  ಖಿನ್ನವಾಗಿ ಬಿಡುತ್ತದೆ. ಮನಸ್ಸು ಪ್ರಭಲವಾಗಿರುವುದು ಅಗತ್ಯ,  ಅದಕ್ಕಾಗಿ ಆಶೆಗಳಿಗೆ ನಿಯಂತ್ರಣ ಬೇಕು. ಶುಭೋದಯ.

ಚಿಂತನೆ

ಮಲ್ಗೋಕ್ ಮುಂಚೆ, ಸ್ನೇಹಿತರೆ, ಸಮಯ ಮತ್ತು ಸಮಯ ಪ್ರಜ್ಞೆ ಹೊಂದಿರುವ ವ್ಯಕ್ತಿ ಜಗತ್ತನ್ನೇ ಗೆಲ್ಲಬಲ್ಲ. ಇಂದು ಈ ಜಗತ್ತಿನಲ್ಲಿ ಹಣ ಹಾಗೂ ಹಣದಿಂದ ಕೊಳ್ಳುವ ವಸ್ತುಗಳಿಗೆ ಮಾತ್ರ ಬೆಲೆ. ಯಾಕೆಂದರೆ ಹಣವೇ ತಾನೇ,  ಸಂಪತ್ತೇ ತಾನೇ, ಪ್ರತಿಷ್ಠೆಯೇ ತಾನೇ ನಮ್ಮೆಲ್ಲರ ಕೊನೆಯ ಗುರಿ. ಆದರೆ ಈ ಹಣಕ್ಕಿಂತ ಮಿಗಿಲಾದದ್ದು ಸಮಯ. ಪ್ರತಿಯೊಬ್ಬ ಮನುಷ್ಯನು ಅನಾಯಾಸವಾಗಿ ಗಳಿಸುವುದು ಈ ೨೪ ಗಂಟೆಗಳ ಸಮಯವನ್ನು, ಮಲಗಿ ಏಳುವದರೊಳಗೆ ೨೪ ಗಂಟೆಗಳನ್ನು ಈತ ಸಂಪಾದಿಸುತ್ತಾನೆ.  ಆದರೆ ಯಾರು ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಮಾತ್ರ ಜೀವನದಲ್ಲಿ ಯಶಗಳಿಸಲು ಸಾಧ್ಯ,  ಯಾಕೆಂದರೆ ೨೪ ಗಂಟೆಗಳು ಪ್ರತಿಯೊಬ್ಬನ ಹತ್ತಿರವೂ ಇದೆ ಆದರೆ ಯಶಸ್ಸು ಮಾತ್ರ ಕೆಲವರ ಪಾಲಾಗಿದೆ, ಸೋಜಿಗವಲ್ಲವೆ? ಏಕೆಂದರೆ ಎಲ್ಲರಿಗೂ ಸಮಾನ ಸಮಯ ಆದರೆ ಯಶಸ್ಸಿನಲ್ಲಿ?  ಇಲ್ಲ ಇಲ್ಲಿ ವ್ಯತ್ಯಾಸವಿದೆ. ಸರಿ ನಾನು ಯಶ ಕಾಣದಿರಲು ನೂರು ಕಾರಣಗಳನ್ನು ಹೇಳಬಹುದು, ಕೆಟ್ಟ ವ್ಯವಸ್ಥೆಯನ್ನು ದೂರಬಹುದು, ಆದರೆ ಅದೇ ಕೆಟ್ಟ ವ್ಯವಸ್ಥೆಯಲ್ಲೇ ಬೆಳೆದು ಸಾಧಿಸಿದ ಅನೇಕ ಸಾಧಕರಿಲ್ಲವೇ? ಹೌದು ನಮ್ಮ ಸಾಧನೆಗೆ ತೊಡಕಾಗಿದ್ದು ನಮ್ಮ time management ನಲ್ಲಿರುವ ತೊಂದರೆಯೇ ಹೊರತು ಬೇರೊಂದಿಲ್ಲ. ಯೋಜನಾಬದ್ಧವಾಗಿ ಕಾರ್ಯನಿರ್ವಹಿಸದೇ ಇರುವ ಸಮಯವನ್ನು ಹಾಳು ಮಾಡಿಕೊಂಡು ವ್ಯವಸ್ಥೆಯನ್ನು ದೂರುವುದು ಎಷ್ಟು ಸರಿ? ನಾವು ಕೈಗೊಳ್ಳುವ ಪುಟ್ಟ ಕಾರ್ಯದಲ್ಲೂ ಸ್ಪಷ್ಟ ಕಲ್ಪನೆಯಿರಬೇಕು ಅದಕ್ಕಾಗಿ ಒಂದು ಸ್ಪಷ್ಟ ಯೋಜನೆ ಇದ್ದರೆ ಅಂದುಕೊಂಡ ಕಾಲದಲ್ಲಿ ಆ ಕಾರ್ಯವನ್ನು ಮಾಡಿ ಮುಗಿಸಬಹುದು ಅನ್ಯಥಾ ಇದು ಸಾಧ್ಯವಾಗದ ಮಾತು. Time and tide never waits for non ಅಲ್ವಾ, ಸಮಯೋಚಿತವಾಗಿ ಯೋಚಿಸುವವನು ಎಲ್ಲದರಲ್ಲಿಯೂ ಜಯಶಾಲಿಯಾಗುತ್ಯಾನೆ. ಹಗಲುಗನಸು ಕಾಣುತ್ತ ಆಕಾಶಗೋಪುರ ಕಟ್ಟುವವರ ಸಮಯ ನಿರರ್ಥಕ. ಆದರೆ ಆಶ್ಚರ್ಯ ನೋಡಿ "ಹಣ ಕಳೆದು ಹೋದರೆ ಬಾಯ್ಬಡಿದುಕೊಂಡು ಅಳುವವರನ್ನೇ ನಾವು ನೋಡಿದ್ದೇವೆ ಅಥವಾ ಸ್ವತಃ ನಾವೇ ಅತ್ತಿದ್ದೇವೆ. ಆದರೆ ಸಮಯ ಕಳೆದುಹೋಯಿತು ಅಯ್ಯೋ ಎಂದು ಅತ್ತವರನ್ನು ನಾನೆಲ್ಲಿ ಕಂಡಿಲ್ಲ". ಕಾಲಾಯ ತಸ್ಮೈಂನಮಹಃ. ಬಳಸಿಕೊಳ್ಳುವವನಿಗೆ ಸಮಯವೇ ಸಂಪತ್ತು . ಶುಭರಾತ್ರಿ

ಹೈ.ಕ.ವಿ.ದಿನಾಚರಣೆ

ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ.
""""""""""""""""""""""""""""""""""""""
ಸೆಪ್ಟೆಂಬರ್ 17 ಹೈದ್ರಾಬಾದ್ ಕರ್ನಾಟಕ ಜನತೆಯ ಪಾಲಿಗೆ ಮರೆಯಲಾಗದ ಮಹಾನ್ ದಿನ. ನಿಜಾಮನ ಕಪಿಮುಷ್ಠಿಯಿಂದ ವಿಮೋಚನೆಗೊಂಡ ಪುಣ್ಯ ದಿನ. ದೇಶಕ್ಕೆ 1947 ಆಗಷ್ಟ್ 15 ರಂದು ಸ್ವಾತಂತ್ರ ಸಿಕ್ಕರೆ, ಹೈದ್ರಾಬಾದ್ ಕರ್ನಾಟಕ ಭಾಗ ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡದ್ದು ಬರೋಬ್ಬರಿ ಒಂದು ವರ್ಷ ಮೂವತ್ತೆರಡು ದಿನಗಳ ನಂತರ. ಅಂದರೆ, 1948 ಸೆಪ್ಟೆಂಬರ್ 17 ರಂದು.
ದೇಶಕ್ಕೇ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದ್ರಾಬಾದ್-ಕರ್ನಾಟಕ ನಿಜಾಮರ ಹಿಡಿತದಲ್ಲಿತ್ತು:ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶ ಅಂತಾನೇ ಗುರುತಿಸಿಕೊಂಡಿದೆ. ಅಭಿವೃದ್ಧಿಯಲ್ಲಿ ಮಾತ್ರವಲ್ಲ. ಈ ಪ್ರದೇಶ ಸ್ವಾತಂತ್ರ ಪಡೆಯುವಲ್ಲಿಯೂ ಹಿಂದೆಯೇ ಉಳಿದಿತ್ತು. 1947 ಆಗಸ್ಟ್ 15 ರಂದು ಭಾರತ ಬ್ರಿಟೀಷರ ಗುಲಾಮಗಿರಿಯಿಂದ ಸ್ವಾತಂತ್ರ್ಯ ಪಡೆಯಿತು. ಆದರೆ, ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಈಗಿನ ಹೈದ್ರಾಬಾದ್ ಕರ್ನಾಟಕ ಪ್ರದೇಶ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲ ಪ್ರದೇಶಗಳು 1947 ರ ನಂತರವೂ ಸ್ವಾತಂತ್ರ್ಯಗೊಂಡಿರಲಿಲ್ಲ. ಹೈದ್ರಾಬಾದ್ ರಾಜ್ಯದ ನಿಜಾಮ ಮೀರ್ ಉಸ್ಮಾನ್ ಅಲಿ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಸುತಾರಾಂ ಒಪ್ಪಲಿಲ್ಲ.

➡200 ಸ್ವಾತಂತ್ರ್ಯ ಹೋರಾಟಗಾರರ ಬಲಿ:
ಭಾರತದ ಒಕ್ಕೂಟ ವ್ಯವಸ್ಥೆ ಒಪ್ಪದ ನಿಜಾಮರ ವಿರುದ್ಧ ಜನ ದಂಗೆ ಏಳಲಾರಂಭಿಸಿದರು. ಆದರೆ, ದಂಗೆ ಎದ್ದ ಜನರನ್ನ ಹತ್ತಿಕ್ಕಲು ನಿಜಾಮನ ಮತಾಂಧ ಸೇನಾನಿ ಖಾಸಿಂ ರಜ್ವಿ ತನ್ನ ರಜಾಕಾರ್ ಸಂಘಟನೆಯ ಮೂಲಕ ಅನಾಚರದ ಹಾದಿ ಹಿಡಿದಿದ್ದ. ರಜಾಕಾರರಿಂದ ಕೊಲೆ, ಲೂಟಿ, ಅತ್ಯಾಚಾರುಗಳು ತೀವ್ರವಾದವು. ರಜಾಕಾರರ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಹೋರಾಟಗಳು ನಡೆದವು. ಸಾಕಷ್ಟು ಜನ ಈ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದರು. ಸ್ವಾತಂತ್ರ್ಯ ಬಂದಾಗಲೂ ತ್ರಿವರ್ಣ ಧ್ವಜ ಹಿಡಿದು ಓಡಾಡೋದು ಕಷ್ಟವಾಗಿತ್ತು. ಯಾಕಂದ್ರೆ ರಜಾಕಾರರ ಕ್ರೌರ್ಯ ಎಲ್ಲೆ ಮೀರಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋಟರ್ ಗ್ರಾಮದ ಲಕ್ಷ್ಮಿ ದೇವಾಲಯದ ಮುಂದೆ 200ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರನ್ನು ನಿಜಾಮರ ಕಟ್ಟಾಳುಗಳಾದ ರಜಾಕಾರರು ನಿರ್ದಯವಾಗಿ ಕೊಂದಿದ್ದರು.

✏ಸರ್ದಾರ್ ವಲ್ಲಭಾಯ್ ಪಟೇಲರಿಂದ ಸಿಕ್ಕಿತು ಸ್ವಾತಂತ್ರ್ಯ:
ಜನರ ಮೇಲೆ ಹಿಂಸಾಚಾರ ನಡೆಸುತ್ತಿದ್ದ ನಿಜಾಮರ ಆಡಳಿತಕ್ಕೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದ ಉಕ್ಕಿನ ಮನುಷ್ಯ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಮಿಲಿಟರಿ ಕಾರ್ಯಾಚರಣೆ ನಡೆಸಿದರು. ಇದರ ಫಲವಾಗಿ 1948, ಸೆಪ್ಟೆಂಬರ್ 17 ರಂದು ನಿಜಾಮರ ಆಳ್ವಿಕೆ ಕೊನೆಗೊಂಡಿತು. ಹೈದ್ರಾಬಾದ್ ಕರ್ನಾಟಕ ಭಾಗ ವಿಮೋಚನೆಗೊಂಡು ಅಖಂಡ ಭಾರತದಲ್ಲಿ ಸೇರ್ಪಡೆಯಾಯಿತು. ಮೊದ ಮೊದಲು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನವನ್ನು ಕೆಲವು ಸಂಘಟನೆಗಳಷ್ಟೇ ಆಚರಿಸುತ್ತಿದ್ದವು. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ, ಕೃಷ್ಣ, ಈ ಮಹತ್ವದ ದಿನವನ್ನು ಸರಕಾರದ ವತಿಯಿಂದಲೇ ಆಚರಿಸಲು ನಿರ್ಧರಿಸಿದರು. ಅಂದಿನಿಂದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನದಂದು ರಾಜ್ಯದ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಪರಂಪರೆ ಇದೆ.
ಇಷ್ಟೆಲ್ಲ ಹೋರಾಟ ನಡೆಸಿದ ಈ ಭಾಗ ಅಭಿವೃದ್ಧಿಯಾಗಿದ್ದು ಅಷ್ಟಕ್ಕಷ್ಟೆ. ಸದ್ಯ ಜಾರಿಯಾಗಿರುವ 371ನೇ ಕಲಂನಿಂದಾದರೂ ಈ ಭಾಗದಲ್ಲಿ ಅಭಿವೃದ್ಧಿಯಾಗಬೇಕಿದೆ.

ಗಣೇಶ

ಗಣೇಶ ಚತುರ್ಥಿ.

ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಪುರಾಣದಲ್ಲಿ.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವ ವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು.
ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು.
ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.

ಗಣಪತಿ ಪೂಜೆ (ಕೆಲವು ಮಾಹಿತಿಗಳು)

ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ| ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ: ಸೀದ ಸಾಧನಂ|| (ಯಜುರ್ವೇದ ಸಂಹಿತೆ) ತ್ವಮೇವ ಕೇವಲಂ ಕರ್ತಾಸಿ ತ್ವಮೇವ ಕೇವಲಂ ಧರ್ತಾಸಿ ತ್ವಮೇವ ಕೇವಲಂ ಹರ್ತಾಸಿ ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ತ್ವಂ ಸಾಕ್ಷಾದಾತ್ಮಾಸಿ ಆತ್ಮಂ ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್ - 'ಗಣೇಶಾಥರ್ವಶೀರ್ಷ'ದಲ್ಲಿ ಆತನನ್ನು ಹೀಗೆ ವರ್ಣಿಸಲಾಗಿದೆ.
( B R Joshi Teacher Gangavathi )

ಗಣೇಶನ ಹುಟ್ಟು

ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು.

ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.

ಗಣೇಶನ ಹಬ್ಬ

ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.

ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದಂತೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

ಗಣೇಶನ ಹಬ್ಬದ ವೈಶಿಷ್ಟ್ಯತೆಗಳು

ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ.
ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.

ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳ ವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.
ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
"ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್"
              ಬಿ.ಆರ್.ಜೋಷಿ.

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23

anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 :   ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...